ಇಚ್ಛೆ 2

ಮನಶ್ಶಾಸ್ತ್ರದ ರೀತ್ಯ ಇಚ್ಛೆಯ (ಡಿssಸೈರ್) ವಿಷಯವನ್ನಿಲ್ಲಿ ಪ್ರತಿಪಾದಿಸಲಾಗಿದೆ. ಗುರಿಯ ಸ್ಪಷ್ಟ ತಿಳಿವಳಿಕೆ ಇದ್ದು ಅದನ್ನು ಸಾಧಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಮನಃಸ್ಥಿತಿಯನ್ನು ಇಚ್ಛೆ ಎಂದು ಕರೆಯಬಹುದು. ಇಚ್ಛೆಯ ವ್ಯಾಖ್ಯೆಯನ್ನು ಮಾಡುವವರಲ್ಲಿ ಎರಡು ಮುಖ್ಯ ಪಂಗಡಗಳನ್ನು ಗುರುತಿಸಬಹುದು. ಸುಖತತ್ತ್ವವಾದಿಗಳದ್ದು ಒಂದು ಗುಂಪು. ಇತರರದ್ದು ಇನ್ನೊಂದು ಗುಂಪು.

ಸುಖತತ್ತ್ವವಾದಿಗಳ ಪ್ರಕಾರ, ಇಚ್ಛೆಯ ಸಮಸ್ತ ಗುರಿ ಸುಖ. ಅಂದರೆ ಹಿತಕರವಾದ ಅನುಭವಗಳನ್ನು ಅರಸುವುದೂ ಮತ್ತು ಅಹಿತಕರವಾದ ಅನುಭವಗಳಿಂದ ತಪ್ಪಿಸಿಕೊಳ್ಳುವುದೂ ಮನುಷ್ಯನ ಎಲ್ಲ ಇಚ್ಛಾಕ್ರಿಯೆಗಳ ಪರಮ ಉದ್ದೇಶ (ಜೆ.ಎಸ್.ಮಿಲ್). ತಮ್ಮ ಈ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು, ಸುಖತತ್ತ್ವವಾದಿಗಳು, ಪರಿಣಾಮವಾದಿಗಳ ನೆರವನ್ನು ಪಡೆಯುತ್ತಾರೆ. ಜೀವಿಯ ಪ್ರತಿಯೊಂದು ಸುಖಾನುಭವವೂ ಜೀವಸತ್ತ್ವವನ್ನು ಅಧಿಕಗೊಳಿಸಿದರೆ ಅದರ ಪ್ರತಿಯೊಂದು ದುಃಖಾನುಭವವೂ ಜೀವಸತ್ತ್ವವನ್ನು ಕ್ಷೀಣಿಸುತ್ತದೆ (ಹರ್ಬರ್ಟ್ ಸ್ಪೆನ್ಸರ್). ಸುಖಾನುಭವ ಜೀವನದ ಅಲೆಯನ್ನು ಉಬ್ಬಿಸಿದರೆ ದುಃಖಾನುಭವ ಅದನ್ನು ಇಳಿಸುತ್ತದೆ. ಜೀವಪ್ರಪಂಚದ ವ್ಯಾಪಾರದಲ್ಲಿ ಈ ನಿಯಮ ಪ್ರಮುಖವಾಗಿರುವುದರಿಂದ, ಪ್ರತಿಯೊಂದು ಜೀವಿಯೂ ದುಃಖವನ್ನು ತಪ್ಪಿಸಿಕೊಂಡು, ಸುಖವನ್ನು ಪಡೆಯಬೇಕೆಂಬ ಇಚ್ಛೆಯಿಂದ ಪ್ರವರ್ತಿಸುತ್ತದೆ. ಹೀಗಿರುವಲ್ಲಿ, ಜೀವಿಯ ಇಚ್ಛೆಯ ಪರಮಧ್ಯೇಯ ಸುಖವಲ್ಲದೆ ಮತ್ತಾವುದೂ ಅಲ್ಲ ಎಂದು ವಾದಿಸುತ್ತಾರೆ, ಸುಖತತ್ತ್ವವಾದಿಗಳು. 

ಮೇಲಿನ ಅಭಿಮತವನ್ನು, ಸುಖತತ್ತ್ವವಾದಿಗಳ ವಿರೋಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಸೌಖ್ಯವೇ ಇಚ್ಛೆಯ ಪರಮಗುರಿ ಎಂಬುದನ್ನು ಅವರು ಎಂದೂ ಒಪ್ಪುವುದಿಲ್ಲ. ತಮ್ಮ ವಿರೋಧವನ್ನು ಈ ಕಾರಣಗಳಿಂದ ಅವರು ಸಮರ್ಥಿಸಿಕೊಳ್ಳುತ್ತಾರೆ : 1. ಸಾಮಾನ್ಯವಾಗಿ ನಾವು ಏನನ್ನು ಇಚ್ಛಿಸುತ್ತೇವೋ ಅದು ಸುಖವಲ್ಲ, ಉದಾ: ಸಾಮಾನ್ಯವಾಗಿ ನಾವು ಆಹಾರ ಮತ್ತು ಪಾನೀಯಗಳನ್ನು ಇಚ್ಛಿಸುತ್ತೇವೆ. ಆದರೆ, ಹೊಟ್ಟೆಬಾಕ ಮಾತ್ರ ತಿನ್ನುವ ಮತ್ತು ಕುಡಿಯುವುದರಿಂದುಂಟಾಗುವ ಸುಖವನ್ನು ಇಚ್ಛಿಸುತ್ತಾನೆ. 2. ಕೇವಲ ಸುಖವನ್ನೇ ಪ್ರಮುಖ ಗುರಿಯನ್ನಾಗಿ ಉಳ್ಳ ಇಚ್ಛೆ, ಮನಸ್ಸಿನ ಒಂದು ವಿಕಾರ ಭಾವ, ಅದು ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತದೆ. ಸದಾ ಸುಖವನ್ನು ಅರಸುವವನಿಗೆ, ಸುಖ ಬಿಸಿಲುಗುದುರೆಯಾಗುತ್ತದೆ. ಸುಖವನ್ನು ಹಂಬಲಿಸಿದಷ್ಟೂ ಆತ ಅದರಿಂದ ದೂರವಾಗುತ್ತಾನೆ. ಸುಖಾನ್ವೇಷಿಗಳು ಒಂದು ಅತೃಪ್ತ ತಂಡ ಎಂದು ಹೇಳುವುದುಂಟು. ಇದನ್ನೇ ಸುಖತತ್ತ್ವವಾದ ವಿರೋಧಾಭಾಸ ಎಂಬುದಾಗಿ ಕರೆಯುತ್ತಾರೆ. 3. ಜೀವಶ್ರೇಣಿಯ ಅತ್ಯಂತ ಉನ್ನತಮಟ್ಟದಲ್ಲಿರುವ ಮಾನವ ತನಗೆ ಯೋಗ್ಯವೆನಿಸಿದ ವಸ್ತು, ಅದು ದುಃಖವನ್ನುಂಟು ಮಾಡುವುದಾದರೂ ಅದನ್ನು ಪಡೆಯುವ ಇಚ್ಛೆಯನ್ನು ಹೊಂದಿರಬಹುದು. ಉದಾ: ನೈತಿಕ, ಆಧ್ಯಾತ್ಮಿಕ ಮತ್ತು ಸೌಂದರ್ಯಾತ್ಮಕ ಆದರ್ಶಗಳನ್ನು ಸಾಧಿಸುವ ಇಚ್ಛೆ, ವ್ಯಕ್ತಿಗೆ ಅನೇಕ ವೇಳೆ ದುಃಖದಾಯಕವಾಗಿದ್ದರೂ ಅವನ್ನು ಪರಮಧ್ಯೇಯಗಳನ್ನಾಗಿ ಪಡೆದಿರುವುದುಂಟು. ತಪಸ್ಸಿನ ಇಚ್ಛೆ ಪ್ರತ್ಯಕ್ಷ ದುಃಖಕ್ಕೆ ಕಾರಣವಾಗುವುದಾದರೂ ಸಾಧಕ ಅದನ್ನು ಬಿಡಲಾರ. 

ಆದುದರಿಂದ, ಜೈವಿಕತತ್ತ್ವದ ಬಂಧನದಿಂದ ಹೆಚ್ಚು ಕಡಿಮೆ ಮುಕ್ತನಾದ ಮಾನವ ತನ್ನ ಸಂಕಲ್ಪಕ್ಕೆ ಯೋಗ್ಯವೆನಿಸಿದ ಗುರಿಯನ್ನು, ಅದು ಸುಖಕಾರಕವಾಗಲಿ, ದುಃಖಕಾರಕವಾಗಲಿ, ಬುದ್ಧಿಪೂರ್ವಕವಾಗಲಿ ಆರಿಸಿಕೊಳ್ಳುತ್ತಾನೆ. ಅಂದ ಮೇಲೆ ಮಾನವನ ಇಚ್ಛೆಯಲ್ಲಿ ಗುರಿಯ ಜ್ಞಾನ ಅಂತರ್ಗತವಾಗಿದೆ ಎಂದು ಹೇಳಿದ ಹಾಗಾಯಿತು. ಎಲ್ಲಿ ಜ್ಞಾನವಿರುವುದಿಲ್ಲವೋ ಅಲ್ಲಿ ಇಚ್ಛೆಯಿರುವುದಿಲ್ಲ (ಸುಲ್ಲೆ). ಅಂಥ ಜ್ಞಾನ ಗತಿಸಿದ ಹಾಗೂ ನಾವು ಮತ್ತೆ ಮತ್ತೆ ಅನುಭವಿಸಬಹುದಾದ ತೃಪ್ತಿಯ ಅನುಭವದ ನೆನಪಿನಿಂದ ಕೂಡಿರುತ್ತದೆಯಲ್ಲದೆ, ಭವಿಷ್ಯದಲ್ಲಿ ನಾವು ಪಡೆಯಬಹುದಾದ ಅಂಥ ಅನುಭವಗಳ ಕಲ್ಪನೆಯನ್ನೂ ಒಳಗೊಂಡಿರುತ್ತದೆ.
ಕೇವಲ ಸುಖಾನುಭವದಿಂದ ಸಮಸ್ತ ಇಚ್ಛೆಯೂ ತೃಪ್ತಿಹೊಂದುವುದಿಲ್ಲ. ಸುಖ ತಾತ್ಕಾಲಿಕವಾದುದಾದರೆ, ಇಚ್ಛೆ ನಿರೀಕ್ಷಾಪ್ರದವಾಗಿರುತ್ತದೆ. ಅಂದರೆ, ಬುದ್ಧಿ ತಾತ್ಕಾಲಿಕ ಇಚ್ಛೆಗಳನ್ನು ಮೀರಿ ನಿಲ್ಲುತ್ತದೆ. ಉದಾ : ದುರಂತವನ್ನು ಪ್ರತಿಪಾದಿಸುವ ಕಲೆಯೊಂದರಲ್ಲಿ, ಸತತವಾಗಿ ಬರುವ ದುಃಖದ ನಿರೂಪಣೆಯಿದ್ದರೂ ಆ ಕಲೆಯ ಆಸ್ವಾದನೆಯಿಂದ ನಮಗೆ ತೃಪ್ತಿಯುಂಟಾಗುವುದು ನಿಜ. ಅನೇಕ ವೇಳೆ, ಬೌದ್ಧಿಕ ಪ್ರೇರಣೆಯಿಂದಾಗಿ, ತನ್ನ ಇಚ್ಛೆಯನ್ನು ತೃಪ್ತಿಪಡಿಸಿಕೊಳ್ಳಲೂ ಮಾನವ ಸುಖ ದುಃಖಾನುಭವಗಳನ್ನು ಮೀರಿ ನಿಲ್ಲುತ್ತಾನೆ.

ಮನೋವಿಜ್ಞಾನಿಗಳು ಇಚ್ಛೆಗೆ ಒಂದು ನಿರ್ದಿಷ್ಟ ಅರ್ಥವನ್ನು ಕೊಡಲು ಯತ್ನಿಸಿದ್ದಾರೆ. ಗುರಿಯ ಸ್ಪಷ್ಟ ಅರಿವಿರುವ ಮನಃಸ್ಥಿತಿಯೇ ಇಚ್ಛೆ (ಜೇಮ್ಸ್ ಡ್ರೆವರ್). ಇಚ್ಛೆ ಒಂದು ಅಭಿಪ್ರೇರಣೆ (ಮೋಟಿವ್). ಅದು ಗುರಿಯೊಂದರತ್ತ ನಿರ್ದೇಶಿತವಾಗಿರುವ ಮನಃಸ್ಥಿತಿ, ಈ ಸ್ಥಿತಿಯಲ್ಲಿ, ಪ್ರಬಲವಾದ ವೇದನಾನುಭವವಿರುವುದರ ಜೊತೆಗೆ, ಗುರಿಗೆ ಸಂಬಂಧಿಸಿದ ಜ್ಞಾನವೂ ಇರುತ್ತದೆ. (ಆರ್.ಎಸ್. ವುಡ್‍ವರ್ತ್) : ಯಾವುದಾದರೂ ಗುರಿಯತ್ತ ವ್ಯಕ್ತಿಯ ಪ್ರವರ್ತನೆಯನ್ನು ನಿರ್ದೇಶಿಸುವ ಮತ್ತು ಅತೃಪ್ತಿಯಿಂದ ಕೂಡಿರುವ ಭಾವನಾಸ್ಥಿತಿಯೇ ಇಚ್ಛೆ. ಈ ಇಚ್ಛೆಯ ದೃಷ್ಟಿ ಭಾವೀರೂಪವಾಗಿದ್ದು, ತತ್ಕಾಲದ ಸನ್ನಿವೇಶಕ್ಕೆ ಸಂಬಂಧಿಸಿರುವುದಿಲ್ಲ (ಥೌಲೆಸ್). ಒಟ್ಟಿನಲ್ಲಿ, ಇಚ್ಛೆ, ಒಂದು ಜಟಿಲವಾದ ಮತ್ತು ಚಲಾತ್ಮಕವಾದ ಸಮ್ಮಿಶ್ರ ಮನಃಸ್ಥಿತಿ. ಅದು ಮೂರು ವಿಧವಾದ ಚಿತ್ತಾಂಶಗಳನ್ನೂ ಒಳಗೊಂಡಿರುತ್ತದೆ : ಜ್ಞಾನ (ಕಾಗ್ನಿಷನ್), ಭಾವನೆ (ಅಫೆಕ್ಷನ್) ಮತ್ತು ಪ್ರವರ್ತನೆ. ಇಚ್ಛೆಯಲ್ಲಿ, ಇಚ್ಛಿತ ವಸ್ತುವಿನ ಜ್ಞಾನ ಅಡಕವಾಗಿರುತ್ತದೆ. ಇಚ್ಛಿತ ವಸ್ತು ನಮಗೆ ಚಿರಪರಿಚಿತವಾದುದಾಗಿರಬಹುದು ಅಥವಾ ನೂತನವಾದುದಾಗಿರಬಹುದು. ಎರಡನೆಯದಾಗಿ, ಇಚ್ಛೆಯಲ್ಲಿ, ಸುಖದುಃಖಾನುಭವಗಳ ಅಥವಾ ನಲಿವು ಮತ್ತು ನೋವುಗಳ ನಿರೀಕ್ಷಣೆಯ ಮಿಶ್ರಭಾವವಿರುತ್ತದೆ. ಭವಿಷ್ಯದಲ್ಲಿ, ಹಿತಕರವಾದ ವಸ್ತುಗಳ ಸಂಯೋಗವಾಗುವಾಗ ದೊರೆಯಬಹುದಾದ ತೃಪ್ತಿಯ ನಿರೀಕ್ಷಣೆಯಿಂದ ಸುಖಾನುಭವವೂ ನಿಜಸ್ಥಿತಿ ಮತ್ತು ನಿರೀಕ್ಷಿತ ತೃಪ್ತಿ ಇವುಗಳ ನಡುವೆ ಇರುವ ಅಂತರದ ಪ್ರಜ್ಞೆಯಿಂದ ಉಂಟಾಗುವ ದುಃಖಾನುಭವವೂ ಅಂತರ್ಮಿಳಿತವಾಗಿರುತ್ತವೆ. ಅಂದರೆ ಇಚ್ಛೆಯಲ್ಲಿ, ನಿರೀಕ್ಷಣಾ ಸುಖ ಮತ್ತು ತತ್ಕಾಲದ ಅತೃಪ್ತಿಯ ನೋವು ಇವೆರಡೂ ಬೆರೆತಿರುತ್ತವೆ. ಸುಖಾನುಭವ, ಗುರಿಯ ಸಾಧ್ಯತೆಗೆ ಅನುಗುಣವಾಗಿದ್ದರೆ, ದುಃಖಾನುಭವ ಆ ಗುರಿಯ ಸಾಧನೆಯಲ್ಲಿ ಆಗಬಹುದಾದ ವಿಳಂಬ ಮತ್ತು ಉಂಟಾಗಬಹುದಾದ ಅಡೆತಡೆಗಳಿಗೆ ಅನುಗುಣವಾಗಿರುತ್ತದೆ. ಕೊನೆಯದಾಗಿ, ಇಚ್ಛಿತ ವಸ್ತುವನ್ನು ಪಡೆಯುವುದರತ್ತ ಇರುವ ಪ್ರವರ್ತನೆ ಇಚ್ಛೆಯಲ್ಲಿ ಅಡಕವಾಗಿರುವ ಅತ್ಯಂತ ಪ್ರಬಲವಾದ ಚಿತ್ತಪ್ರವೃತ್ತಿ, ವಸ್ತುವಿನತ್ತ ಇರುವ ಆಸಕ್ತಿ ಮತ್ತು ಅದನ್ನು ಸಾಧಿಸುವುದಕ್ಕಾಗಿ ಪಡುವ ಪರಿಶ್ರಮಗಳು ಅದರ ಪ್ರಮುಖ ಅಂಶಗಳು. 

ಕೆಲವು ಸ್ವಭಾವ ಸದೃಶ ಚಿತ್ತಪ್ರಕೃತಿಗಳಿಂದ, ಇಚ್ಛೆಯನ್ನು ಬೇರ್ಪಡಿಸುವುದು : ಆವಶ್ಯಕ. ಅವುಗಳಲ್ಲಿ ಆಸೆ (ಅಪೆಟೈಟ್) ಆವೇಗ (ಇಂಪಲ್ಸ್) ಮತ್ತು ಅಪೇಕ್ಷೆ (ವಿಷ್)-ಇವು ಪ್ರಮುಖವಾಗಿವೆ. ಶರೀರದ ಯಾವುದಾದರೂ ಬೇಡಿಕೆಯನ್ನು ಈಡೇರಿಸಬೇಕೆಂದಿರುವ ಅಸ್ಪಷ್ಟ ಪ್ರಜ್ಞೆಯೇ ಆಸೆ. ಉದಾ : ಹಸಿವನ್ನು ಅಥವಾ ಕಾಮವನ್ನು ತೀರಿಸಿಕೊಳ್ಳಲು ಪ್ರಾಣಿಯೊಂದರಲ್ಲಿ ಮೂಡಬಹುದಾದ ಅಸ್ಪಷ್ಟ ಪ್ರಜ್ಞೆ. ನಮ್ಮನ್ನು ಗುರಿಯತ್ತ ತಳ್ಳುವ ಚಿತ್ತಪ್ರವೃತ್ತಿಯೇ ಆವೇಗ. ಇದರಲ್ಲಿ ತಾನು ಕಾರ್ಯಪ್ರವೃತ್ತನಾಗುವ ಪ್ರಜ್ಞೆ ವ್ಯಕ್ತಿಗೆ ಇರುವುದಾದರೂ ಅದರ ಆಗುಹೋಗುಗಳ ಅರಿವು ಇರುವುದಿಲ್ಲ. ಆತ ಕಾರ್ಯಾಂಧನಾಗುತ್ತಾನೆ. ಉದಾ: ಮುಳುಗುತ್ತಿರುವವನನ್ನು ಬದುಕಿಸಲು ಹೊಳೆಗೆ ಹಾರುವವನಲ್ಲಿ, ಪ್ರಮುಖವಾಗಿ, ಒಬ್ಬನ ಪ್ರಾಣವನ್ನು ಉಳಿಸುವ ಆವೇಗವಿರುತ್ತದೆಯಲ್ಲದೆ, ತನ್ನ ಮತ್ತು ತನ್ನ ಕುಟುಂಬವರ್ಗದವರ ರಕ್ಷಣೆಯ ಬಗ್ಗೆ ಆತ ಅಂಧನಾಗಿರುತ್ತಾನೆ. ಕೊನೆಯದಾಗಿ ಅಪೇಕ್ಷೆ. ಇದು ಒಂದು ಜಡವಾದ ಹಾಗೂ ಸತ್ತ್ವಹೀನವಾದ ಇಚ್ಛೆ ಎಂಬುದು ಹಲವರ ಅಭಿಮತ. ಅದು ತಿರುಕನ ಕನಸಿನಂತೆ ಮಿಂಚಿ ಮಾಯವಾಗುತ್ತದೆ. ಆದರೆ ಮನೋವಿಶ್ಲೇಷಣಾ ತಜ್ಞರು, ಅದರಲ್ಲೂ ಮನೋವಿಶ್ಲೇಷಣೆಯ ಪಿತನೆಂದೆನಿಸಿರುವ ಫ್ರಾಯ್ಡ್, ಅಪೇಕ್ಷೆಗೆ ಬದಲಾಗಿ ವಾಂಛೆ ಎಂಬ ಕಲ್ಪಿತ ಭಾವವನ್ನು ಉಪಯೋಗಿಸುತ್ತಾರೆ. ಅವರ ಪ್ರಕಾರ, ವಾಂಛೆ ಕೇವಲ ಸತ್ತ್ವಹೀನವಾದ ಇಚ್ಛೆಯಾಗಿರದೆ, ಅತ್ಯಂತ ಪ್ರಬಲವಾದ ಪ್ರಭಾವಕಾರಿಯಾದ ಸುಪ್ತ ಇಚ್ಛೆಯಾಗಿರುತ್ತದೆ. ಅದು ಪರೋಕ್ಷವಾಗಿ, ಆದರೂ ಪರಿಣಾಮಕಾರಿಯಾಗಿ ವ್ಯಕ್ತಿಯ ಮಾನಸಿಕ ಜೀವನದಲ್ಲಿ ತನ್ನ ಪ್ರಭುತ್ವವನ್ನು ನಡೆಸುತ್ತದೆ. ಇದರಲ್ಲಿ ಕಾಮವಾಂಛೆಯೇ (ಲಿಬಿಡೊ) ಮೂಲಭೂತವಾದುದು. 

ಇಚ್ಛೆಗಳ ಗುಣ ಮತ್ತು ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಸಾಧ್ಯ. ಇಂಥ ಅಧ್ಯಯನದಲ್ಲಿ ತೊಡಗುವಾಗ, ಇಚ್ಛೆಯಲ್ಲಿ ಅಂತರ್ಗತವಾಗಿರುವ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸುವುದು ಅತ್ಯಾವಶ್ಯಕ. ವ್ಯಕ್ತಿ ಏನು ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಅಭಿಪ್ರೇರಣೆ. ಆತನ ಅಂತರಂಗದ ಭಾವನಾನುಭವವೇನು ಎಂಬುದು ವೇದನೆ ಮತ್ತು ಸಂವೇಗ (ಆರ್.ಎಸ್.ವುಡ್‍ವರ್ತ್). ಅಭಿಪ್ರೇರಣೆಗಳಿಗೂ ವೇದನೆ ಮತ್ತು ಸಂವೇಗಗಳಿಗೂ ನಿಕಟ ಸಂಬಂಧವಿದೆ. ಈ ಅಧ್ಯಯನಗಳಲ್ಲಿ, ಅಂತರಾವಲೋಕನ ಮತ್ತು ವಸ್ತುನಿಷ್ಠ ಅವಲೋಕನ ವಿಧಾನಗಳನ್ನು ಪರಿಪೋಷಕವಾಗಿ ಉಪಯೋಗಿಸಬಹುದು.

ಒಬ್ಬ ವ್ಯಕ್ತಿಯಲ್ಲಿರುವ ಇಚ್ಛೆಯ ಅಥವಾ ಇಚ್ಛೆಗಳ ಗುಣ ಮತ್ತು ಪರಿಮಾಣಗಳನ್ನು ಸಾಪೇಕ್ಷವಾಗಿ ಅಳೆಯಬಹುದು. ಅವನ್ನು ವಿವರಿಸಲು ನಾವು ಸಾಮಾನ್ಯವಾಗಿ ಪ್ರಬಲ ಮತ್ತು ದುರ್ಬಲ ಹಾಗೂ ಹೆಚ್ಚು ಮತ್ತು ಕಡಿಮೆ ಎಂಬ ಪದಗಳನ್ನು ಬಳಸುತ್ತೇವೆ. ಇವುಗಳನ್ನೇ ಆಧಾರವಾಗಿ ಇಟ್ಟುಕೊಂಡು ನಿರ್ಧಾರಣಾ ಮಾಪಿಗಳನ್ನು (ರೇಟಿಂಗ್ ಸ್ಕೇಲ್) ಸಿದ್ಧಪಡಿಸಿ, ಅಂತರಾವಲೋಕನ ಹಾಗೂ ವಸ್ತುನಿಷ್ಠ ಅವಲೋಕನ ಇವೆರಡರಲ್ಲೂ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. 

ಪರೀಕ್ಷಾರ್ಥಿಯೊಬ್ಬ ಅಂತರಾವಲೋಕನ ವಿಧಾನದಿಂದ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನಲ್ಲಿರಬಹುದಾದ ಇಚ್ಛೆಯ ಗುಣ ಮತ್ತು ಪರಿಮಾಣಗಳನ್ನು ನಿರ್ಧಾರಣಾ ಮಾಪಿಯ ನೆರವಿನಿಂದ ನಿರ್ಧರಿಸಬಹುದು. ಅದರಂತೆಯೇ ಒಂದು ನಿರ್ದಿಷ್ಟ ಸಮಯದಲ್ಲಿ, ಯಾವುದಾದರೂ ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ವ್ಯಕ್ತಿಯೊಬ್ಬನು ಎಷ್ಟು ಶ್ರಮವಹಿಸುತ್ತಾನೆ ಎಂಬುದನ್ನೂ ಮತ್ತು ಆತನ ಆಯ್ಕೆಗಳನ್ನೂ ವಸ್ತುನಿಷ್ಠ ಅವಲೋಕನದಿಂದ ಅಧ್ಯಯನ ಮಾಡಿ, ಆತನ ಇಚ್ಛೆಯ ಅಥವಾ ಇಚ್ಛೆಗಳ ಪರಿಮಾಣವೇನು ಎಂಬುದನ್ನು ನಿರ್ಧರಿಸಬಹುದು (ಥೌಲೆಸ್). ಈ ಅಧ್ಯಯನಕ್ಕೆ, ಇಚ್ಛಿತ ವಸ್ತುವೊಂದನ್ನು ಪಡೆಯಲು ವ್ಯಕ್ತಿ ಹಣದ ರೂಪದಲ್ಲಿ ತೆರಬಹುದಾದ ಬೆಲೆಯೂ ನೆರವಾಗಬಲ್ಲದು. ಉದಾ: ಒಬ್ಬ ವ್ಯಕ್ತಿ ಒಂದು ಸಮಯದಲ್ಲಿ ಒಂದು ರೂಪಾಯಿ ಕೊಟ್ಟು, ಸ್ವಲ್ಪ ಆಹಾರವನ್ನು ಕೊಳ್ಳುವುದಕ್ಕೆ ಬದಲಾಗಿ, ಐದು ರೂಪಾಯಿ ಬೆಲೆಬಾಳುವ ಪುಸ್ತಕವೊಂದನ್ನು ಕೊಂಡುಕೊಂಡಾಗ, ಆಹಾರಕ್ಕಿಂತ, ಪುಸ್ತಕದ ಮೇಲಿನ ಇವನ ಇಚ್ಛೆ ಹೆಚ್ಚು ಪ್ರಬಲವಾಗಿದೆ ಎಂದು ಹೇಳಬಹುದು. ಆದರೆ, ಕೊಡಲಾದ ಬೆಲೆಯನ್ನೇ ಆಧಾರವಾಗಿ ಇಟ್ಟುಕೊಂಡು ಆತನಲ್ಲಿರುವ ಪುಸ್ತಕದ ಮೇಲಿನ ಇಚ್ಛೆ, ಆಹಾರದ ಮೇಲಿನ ಇಚ್ಛೆಗಿಂತ ಐದು ಪಟ್ಟು ಅಧಿಕವಾಗಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕಾರಣವೇನೆಂದರೆ ಆ ವ್ಯಕ್ತಿ ಕೊಡುವ ಬೆಲೆ, ಇಚ್ಛೆಯ ತೀವ್ರತೆಯನ್ನು ಅವಲಂಬಿಸಿರುವುದಾದರೂ ಸಂಪೂರ್ಣವಾಗಿ ಅದರಿಂದಲೇ ನಿರ್ಧರಿತವಾಗಲಾರದು. ಇತರ ಕಾರಣಾಂಶಗಳು (ಮಾರಾಟಗಾರ ಕೊಡುವ ಭಾವಪ್ರೇರಣೆ, ಇತರ ವಸ್ತುಗಳ ವಿಷಯದಲ್ಲಿ ದೊರಕಿರುವ ತೃಪ್ತಿ ಇತ್ಯಾದಿ) ತಮ್ಮ ಪ್ರಭಾವವನ್ನು ಬೀರಬಹುದು. ಇಚ್ಛೆಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನಗಳು ಮನೋವಿಜ್ಞಾನ ಕ್ಷೇತ್ರದಲ್ಲಿ ನಡೆದಿಲ್ಲ. ಬಹುಶಃ ಈ ಸಮ್ಮಿಶ್ರ ಮನಃಸ್ಥಿತಿಯ ಜಟಿಲತೆಯೇ ಅದಕ್ಕೆ ಕಾರಣವಿರಬಹುದು. ಆದರೆ ನುರಿತ ಹಾಗೂ ವಿವೇಕಶಾಲಿಗಳಾದ ಸಂಶೋಧಕರು ಈ ದಿಶೆಯಲ್ಲಿ ಪ್ರಯತ್ನ ನಡೆಸಿದರೆ ವಿಜಯಿಗಳಾಗುವುದರಲ್ಲಿ ಸಂಶಯವಿಲ್ಲ. ಇಚ್ಛೆಗೂ ಸಂಕಲ್ಪಕ್ಕೂ (ವಿಲ್) ಇರುವ ಸಂಬಂಧದ ಬಗೆಗೆ.
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ